ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
3 ಯೊವಾನ್ನನು
1ನೇ ಅಧ್ಯಾಯ
- Verse 1: ಯಥಾರ್ಥ ಪ್ರೀತಿಗೆ ಪಾತ್ರನಾದ ಗಾಯನಿಗೆ - ಸಭೆಯ ಹಿರಿಯನಾದ ನಾನು ಬರೆಯುವ ಪತ್ರ:
- Verse 2: ಪ್ರಿಯನೇ, ಎಲ್ಲಾ ವಿಷಯಗಳಲ್ಲಿ ನಿನಗೆ ಶುಭವನ್ನು ಕೋರುತ್ತೇನೆ; ನಿನ್ನ ಸುಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಆತ್ಮದ ವಿಷಯದಲ್ಲಿ ನೀನು ಅಭಿವೃದ್ಧಿಗೊಳ್ಳುತ್ತಿರುವೆ ಎಂದು ನಂಬಿದ್ದೇನೆ.
- Verse 3: ನೀನು ಸತ್ಯದಲ್ಲಿ ನಿಷ್ಠಾವಂತನಾಗಿದ್ದು, ಸನ್ಮಾರ್ಗದಲ್ಲಿ ನಡೆಯುತ್ತಿರುವುದಾಗಿ ಕೆಲವು ಸಹೋದರರು ಇಲ್ಲಿಗೆ ಬಂದು ತಿಳಿಸಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ.
- Verse 4: ನನ್ನ ಪ್ರಿಯಮಕ್ಕಳು ಸತ್ಯಸಂಧರಾಗಿ ನಡೆಯುತ್ತಿದ್ದಾರೆಂದು ಕೇಳುವುದಕ್ಕಿಂತ ಮಿಗಿಲಾದ ಆನಂದ ನನಗಿಲ್ಲ.
- Verse 5: ಪ್ರಿಯನೇ, ಸಹೋದರರಿಗೆ - ಮುಖ್ಯವಾಗಿ ಅಪರಿಚಿತರಿಗೆ ಸತ್ಕಾರ್ಯವನ್ನು ಮಾಡುವುದರಲ್ಲಿ ನೀನು ತುಂಬಾ ನಿಷ್ಠಾವಂತನು.
- Verse 6: ಇಲ್ಲಿಯ ಸಭೆಯ ಮುಂದೆ ಅವರೇ ನಿನ್ನ ಪ್ರೀತ್ಯಾದರವನ್ನು ಪ್ರಶಂಶಿಸಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು.
- Verse 7: ಅವರು ಈ ಸಂಚಾರವನ್ನು ಕೈಗೊಂಡಿರುವುದು ಕ್ರಿಸ್ತಯೇಸುವಿನ ಸೇವೆಗಾಗಿಯೆ. ಅನ್ಯಧರ್ಮೀಯರಿಂದ ಅವರು ಯಾವ ಸಹಾಯವನ್ನೂ ಸ್ವೀಕರಿಸುವವರಲ್ಲ. ಆದ್ದರಿಂದ, ಇಂಥವರಿಗೆ ನಾವು ನೆರವಾಗಲೇಬೇಕು.
- Verse 8: ಹೀಗೆ ಸತ್ಯಕ್ಕಾಗಿ ದುಡಿಯುವವರೊಂದಿಗೆ ನಾವು ಸಹಕರಿಸಬೇಕು.
- Verse 9: ನಾನು ನಿಮ್ಮ ಸಭೆಗೆ ಚಿಕ್ಕ ಪತ್ರವೊಂದನ್ನು ಬರೆದಿದ್ದೇನೆ. ಆದರೆ ಅಲ್ಲಿಯ ಸಭೆಗೆ ಮುಖಂಡನಾಗ ಬಯಸುತ್ತಿರುವ ದಿಯೊತ್ರೇಫನು ನನ್ನ ಮಾತನ್ನು ಗೌರವಿಸುತ್ತಿಲ್ಲ.
- Verse 10: ನಾನು ಬಂದಾಗ, ಅವನು ಮಾಡುತ್ತಿರುವುದನ್ನೆಲ್ಲಾ ಹೊರಗೆಡಹುತ್ತೇನೆ. ನಮ್ಮ ವಿರುದ್ಧ ಅವನು ಅಪಪ್ರಚಾರ ಮಾಡುತ್ತಾ ಹರಟೆಕೊಚ್ಚುತ್ತಿದ್ದಾನೆ. ಸಾಲದೆಂದು, ಸಹೋದರರನ್ನು ಸ್ವಾಗತಿಸಲು ನಿರಾಕರಿಸುತ್ತಿದ್ದಾನೆ. ಹಾಗೆ ಸ್ವಾಗತಿಸಬಯಸುವವರನ್ನು ನಿರ್ಬಂಧಿಸಿ ಸಭೆಯಿಂದ ಬಹಿಷ್ಕರಿಸುತ್ತಿದ್ದಾನೆ.
- Verse 11: ಪ್ರಿಯನೇ, ನೀನು ಕೆಟ್ಟದ್ದನ್ನು ಅನುಸರಿಸದೆ ಒಳ್ಳೆಯದನ್ನೇ ಅನುಸರಿಸಿ ನಡೆ. ಒಳಿತನ್ನು ಮಾಡುವವನು ದೇವರಿಗೆ ಸೇರಿದವನು. ಕೆಡುಕನ್ನು ಮಾಡುವವನು ದೇವರನ್ನು ಕಾಣದವನು.
- Verse 12: ದೆಮೇತ್ರಿಯನ ವಿಷಯದಲ್ಲಿ ಎಲ್ಲರೂ ಒಳ್ಳೆಯದನ್ನೇ ಹೇಳುತ್ತಾರೆ. ಸತ್ಯವೂ ಅವನ ಪರವಾಗಿದೆ. ನಾವು ಅವನ ಬಗ್ಗೆ ಸಾಕ್ಷಿ ಹೇಳಬಲ್ಲೆವು. ನಮ್ಮ ಸಾಕ್ಷ್ಯ ಸತ್ಯವೆಂದು ನೀನು ಬಲ್ಲೆ.
- Verse 13: ನಾನು ನಿನಗೆ ತಿಳಿಸಬೇಕಾದುದು ಇನ್ನೂ ಎಷ್ಟೋ ಇದೆ. ಕಾಗದಪತ್ರಗಳ ಮೂಲಕ ತಿಳಿಸಲು ನನಗಿಷ್ಟವಿಲ್ಲ.
- Verse 14: ಸದ್ಯದಲ್ಲೇ ನಿನ್ನನ್ನು ಕಾಣುವ ನಿರೀಕ್ಷೆ ನನಗಿದೆ. ಆಗ ನಾವು ಮುಖಾಮುಖಿಯಾಗಿ ಮಾತಾಡಬಹುದು.
- Verse 15: ಶಾಂತಿಸಮಾಧಾನ ನಿನ್ನಲ್ಲಿರಲಿ! ಮಿತ್ರರೆಲ್ಲರೂ ನಿನಗೆ ವಂದನೆ ಹೇಳಿದ್ದಾರೆ. ಅಲ್ಲಿರುವ ಪ್ರತಿಯೊಬ್ಬ ಮಿತ್ರನಿಗೂ ನಮ್ಮ ವಂದನೆಗಳನ್ನು ತಿಳಿಸು.