ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
2 ಯೊವಾನ್ನನು
1ನೇ ಅಧ್ಯಾಯ
- Verse 1: ದೇವರಿಂದ ಆಯ್ಕೆಯಾದ ಶ್ರೀಮಾತೆಗೂ ಆಕೆಯ ಮಕ್ಕಳಿಗೂ - ಸಭಾಹಿರಿಯನಾದ ನಾನು ಬರೆಯುವ ಪತ್ರ.
- Verse 2: ನಮ್ಮಲ್ಲಿ ನೆಲೆಗೊಂಡಿರುವ ಹಾಗೂ ನಮ್ಮಲ್ಲಿ ಶಾಶ್ವತವಾಗಿರುವ ಸತ್ಯದ ಪ್ರಯುಕ್ತ ನಾನು ಮತ್ತು ಸತ್ಯವನ್ನು ಅರಿತಿರುವ ಎಲ್ಲರು ನಿಮ್ಮಲ್ಲಿ ಪ್ರೀತಿಯನ್ನಿಟ್ಟಿದ್ದೇವೆ.
- Verse 3: ಪಿತನಾದ ದೇವರಿಂದಲೂ ಅವರ ಪುತ್ರ ಯೇಸುಕ್ರಿಸ್ತರಿಂದಲೂ ಕೃಪೆ, ಕರುಣೆ, ಶಾಂತಿ, ಸಮಾಧಾನಗಳು ಸತ್ಯಪೂರ್ವಕವಾಗಿಯೂ ಪ್ರೀತಿಪೂರ್ವಕವಾಗಿಯೂ ನಮ್ಮಲ್ಲಿ ನೆಲೆಸಲಿ!
- Verse 4: ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ.
- Verse 5: ಶ್ರೀಮಾತೆಯೇ, ನಾನು ಮಾಡುವ ಬಿನ್ನಹವಿದು: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಮೊತ್ತಮೊದಲಿನಿಂದಲೂ ನಮಗೆ ಕೊಡಲಾದ ಆಜ್ಞೆಯೇ ಹೊರತು ಹೊಸದೇನೂ ಅಲ್ಲ.
- Verse 6: ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಪ್ರೀತಿ. ಪ್ರೀತಿಮಾರ್ಗದಲ್ಲಿ ನಡೆಯಬೇಕೆಂಬುದೇ ನೀವು ಮೊತ್ತಮೊದಲಿನಿಂದಲೂ ಕೇಳಿರುವ ಆಜ್ಞೆ.
- Verse 7: ಅನೇಕ ಮಂದಿ ವಂಚಕರು ಲೋಕದಲ್ಲಿ ತಲೆದೋರಿದ್ದಾರೆ. ಯೇಸುಕ್ರಿಸ್ತರು ಮನುಷ್ಯ ಆಗಿಬಂದರೆಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಇಂಥವನು ವಂಚಕನೂ ಕ್ರಿಸ್ತವಿರೋಧಿಯೂ ಹೌದು.
- Verse 8: ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು.
- Verse 9: ಕ್ರಿಸ್ತಯೇಸುವಿನ ಉಪದೇಶದಲ್ಲಿ ನೆಲೆಸದೆ ಅದರ ಎಲ್ಲೆಮೀರಿ ನಡೆಯುವವನಲ್ಲಿ ದೇವರು ಇರುವುದಿಲ್ಲ. ಆ ಉಪದೇಶದಲ್ಲಿ ನೆಲೆಸಿರುವವನಲ್ಲಿ ಪಿತ ಮತ್ತು ಪುತ್ರ ಇಬ್ಬರೂ ಇರುತ್ತಾರೆ.
- Verse 10: ಈ ಉಪದೇಶವನ್ನು ಒಪ್ಪದಿರುವ ಯಾವನಾದರೂ ನಿಮಗೆ ಉಪದೇಶಮಾಡಬಂದರೆ, ಮನೆಯೊಳಗೆ ಸೇರಿಸಬೇಡಿ; ಅವನನ್ನು ಹರಸಲೂಬೇಡಿ.
- Verse 11: ಏಕೆಂದರೆ, ಹರಸುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.
- Verse 12: ನಾನು ನಿಮಗೆ ತಿಳಿಸಬೇಕಾದ ವಿಷಯಗಳು ಬಹಳಷ್ಟಿವೆ. ಆದರೆ ಅವುಗಳನ್ನು ಕಾಗದಪತ್ರಗಳ ಮೂಲಕ ತಿಳಿಸಲು ನನಗೆ ಇಷ್ಟವಿಲ್ಲ. ನಾನೇ ನಿಮ್ಮಲ್ಲಿಗೆ ಬಂದು ನಿಮ್ಮ ಸಂಗಡ ಮಾತನಾಡುವ ನಿರೀಕ್ಷೆ ಇದೆ. ಹೀಗೆ ಮುಖಾಮುಖಿಯಾಗಿ ಮಾತನಾಡುವುದರಿಂದ ಪೂರ್ಣಸಂತೋಷವೂ ಆಗುತ್ತದೆ.
- Verse 13: ದೇವರಿಂದ ಆಯ್ಕೆಯಾದ ನಿನ್ನ ಸಹೋದರಿಯ ಮಕ್ಕಳು ನಿನಗೆ ನಮಸ್ಕಾರ ಹೇಳಿದ್ದಾರೆ.